ಮಾತಲಿ
ಇಂದ್ರನ ಸಾರಥಿ. ಮಾತನಲ ಮಗನಾದುದರಿಂದ ಮಾತಲಿ ಎಂಬ ಹೆಸರಾಯಿತು. ಹೆಂಡತಿ ಸುಧರ್ಮೆ. ಮಗ ಗೋಮುಖ, ಇಂದ್ರನ ಮಗನಾದ ಜಯಂತನ ಸಾರಥಿ. ಮಗಳು ಗುಣಕೇಶಿ ಅನುಪಮ ಸುಂದರಿ. ಕೇವಲ ದೈಹಿಕ ಬಲವೊಂದೇ ಯುದ್ಧದಲ್ಲಿ ವಿಜಯ ತಂದುಕೊಡಲಾರದು ಎಂಬುದಕ್ಕೆ ಉದಾಹರಣೆಯಾಗಿ ಕಣ್ವರು ಮಾತಲಿಯ ವೃತ್ತಾಂತವನ್ನು ದುರ್ಯೋಧನನಿಗೆ ಹೇಳುತ್ತಾರೆ. ತನ್ನ ಮಗಳ ಚಲುವಿಗೆ ತಕ್ಕಂಥ ವರನನ್ನು ದೇವ-ಮಾನವ ಲೋಕಗಳಲ್ಲಿ ಕಾಣದ ಮಾತಲಿ ನಾರದರೊಂದಿಗೆ ಪಾತಾಳ ಹೊಕ್ಕಿ ಸುಮುಖನೆಂಬ ನಾಗನಿಗೆ ತನ್ನ ಮಗಳನ್ನು ಕೊಡಲು ಬಯಸುತ್ತಾನೆ. ಆತ ಗರುಡನ ದ್ವೇಷಕ್ಕೆ ಈಡಾದವ. ಮಾತಲಿ ವಿಷ್ಣುವಿನ ಮೂಲಕವಾಗಿ ಇಂದ್ರನಿಂದ ಸುಮುಖನಿಗೆ ಅಮೃತಕೊಡಿಸಿ ಮಗಳನ್ನಿತ್ತು ಮದುವೆಮಾಡುವ ಸಂದರ್ಭದಲ್ಲಿ, ವಿಷ್ಣು ಹಾಗೂ ಗರುಡರಲ್ಲಿ ನಡೆಯುವ ಬಲಾಬಲಗಳ ಪರೀಕ್ಷೆಯಲ್ಲಿ ದೈವಬಲದೆದುರು ದೈಹಿಕಬಲಕ್ಕೆ ಸೋಲಾಗುತ್ತದೆಂಬುದು ಸಾಬೀತಾಗುತ್ತದೆ. ಈ ಕಥೆಯ ದೃಷ್ಟಾಂತದ ಮೂಲಕ ಕಣ್ವರು ದುಯೋಧನನಿಗೆ ಧರ್ಮರಾಜನೊಂದಿಗೆ ಸಂಧಿ ಮಾಡಿಕೊ ಪಾಂಡವರಿಗೆ ಇಂದ್ರನೇ ಮೊದಲಾದ ದೇವತೆಗಳ ಸಹಾಯವಿದೆ ಎಂದು ಉಪದೇಶಿಸುತ್ತಾರೆ. ಸೇವೆಯನ್ನು ಕೈಗೊಳ್ಳುವವನ ಮೂಲಕ ದೊರೆಯಬಹುದಾದ ಪ್ರಯೋಜನವನ್ನು ಕುರಿತಂತೆ ಮಾಡಲಿ ಇಂದ್ರನೊಂದಿಗೆ ಸಂವಾದಮಾಡುತ್ತಾನೆ. ಈತ ಇಂದ್ರನೊಬ್ಬನಿಗೇ ಸಾರಥಿಯಾಗಿದ್ದವನಲ್ಲ, ಕೆಲವೊಂದು ವಿಜಯದ ವಿಶಿಷ್ಟಸಂದರ್ಭಗಳಲ್ಲಿ ದೇವೇಂದ್ರನ ಅನುಜ್ಞೆಯ ಪ್ರಕಾರ ಇತರರಿಗೂ ಸಾರಥಿಯಾಗಿದ್ದ. ಕಿರಾತರೂಪಿಯಾದ ಶಿವನಿಂದ ಅರ್ಜುನ ಪಾಶುಪತಾಸ್ತ್ರ ಪಡೆದಾಗ ಅವನನ್ನು ಇಂದ್ರನ ರಥದಲ್ಲಿ ಸ್ವರ್ಗಕ್ಕೆ ಕರೆದೊಯ್ದ, ರಾಮರಾವಣರ ಯುದ್ಧದಲ್ಲಿ ಇಂದ್ರನ ಸೂಚನೆಯ ಮೇರೆಗೆ ರಾಮನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಯುದ್ಧಮಾಡಿದ. ಈತನ ವಿಷಯ ರಾಮಾಯಣದ ಯುದ್ಧ ಮತ್ತು ಉತ್ತರಕಾಂಡಗಳಲ್ಲಿ, ಭಾರತದ ಉದ್ಯೋಗ, ವನ, ಅನುಶಾಸನಪರ್ವಗಳಲ್ಲಿ ಬರುತ್ತದೆ.								
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ